ಸೇನಾಪುರ ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರಂ ಕೊರತೆ

ಬೈಂದೂರು: ಕುಂದಾಪುರ ಸುತ್ತಲಿನ ಹತ್ತೂರಿಗೆ ಸಂಪರ್ಕ ಕಲ್ಪಿಸುವ ಸೇನಾಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಫ್ಲಾಟ್‌ಫಾರಂ ಇಲ್ಲದೆ ಸಮಸ್ಯೆಯಾಗುತ್ತಿದೆ.ಇಲ್ಲಿ ಹೆಚ್ಚುವರಿ ಫ್ಲಾಟ್‌ಫಾರಂನೊಂದಿಗೆ ಹಲವು ರೈಲುಗಳಿಗೂ ನಿಲುಗಡೆ ದೊರೆತರೆ ಜನರಿಗೆ ಕಡಿಮೆ ಖರ್ಚಿನಲ್ಲಿ ಪ್ರಯಾಣ ಸಾಧ್ಯವಿದೆ.

ಎರಡು ರೈಲು
ಕುಂದಾಪುರ ಮುಳ್ಳಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ರೈಲು ನಿಲ್ದಾಣಕ್ಕೆ 5 ಕಿ.ಮೀ. ದೂರವಿದ್ದು, ಇಲ್ಲಿ ರೈಲೇರಿದರೆ ಬೈಂದೂರಿಗೆ 10 ರೂ.ಗಳಲ್ಲಿ ಪ್ರಯಾಣಿಸಬಹುದು. ಇತರ ವಾಹನಗಳಿಗೆ 40 ರೂ. ಪ್ರಯಾಣದರವಿದೆ. ಆದರೆ ಇಲ್ಲಿ ದಿನಕ್ಕೆ ಎರಡೇ ರೈಲುಗಳಿಗೆ ನಿಲುಗಡೆಯಿದೆ. ಬೆಳಗ್ಗೆ  8ರಿಂದ 8.45ರ ಅವಧಿಯಲ್ಲಿ ಬಂದು ಹೋಗುವ, ಸಂಜೆ 5 ರಿಂದ 5.45ರ ಅವಧಿಯಲ್ಲಿ ಬಂದು ಹೋಗುವ ಮಂಗಳೂರು ಮಡಗಾಂವ್‌ ಮತ್ತು ಮಂಗಳೂರು ಮಡಂಗಾವ್‌ ಡೆಮು ರೈಲುಗಳಿಗೆ ಮಾತ್ರ ನಿಲುಗಡೆಯಿದೆ. ಇದರಲ್ಲಿ ಡೆಮು ರೈಲು ಭಾನುವಾರವಿಲ್ಲ. ಇನ್ನು ಕಾಸರಗೋಡು ಮೂಕಾಂಬಿಕಾ ರೋಡ್‌ ಬೈಂದೂರು ಪ್ಯಾಸೆಂಜರ್‌ ರೈಲು ಸಂಚಾರ ನಿಲ್ಲಿಸಿ ಅದೆಷ್ಟೋ ಸಮಯವಾಗಿದೆ. ತಾಂತ್ರಿಕ ಕಾರಣ ನೀಡಿ ನಿಲುಗಡೆಯಾದ ಈ ರೈಲಿನ ಬಗ್ಗೆ ಜನಪ್ರತಿನಿಧಿಗಳೂ ಕೇಳಿಲ್ಲ. ಇದು ಹೊರತಾಗಿ ಇಲ್ಲಿ ಹಾದುಹೋಗುವ ಅಷ್ಟೂ ಎಕ್ಸ್‌ಪ್ರೆಸ್‌ ರೈಲುಗಳಿಗೆ ನಿಲುಗಡೆಯಿಲ್ಲ.

ಹಳಿ ದಾಟಬೇಕು 
ಒಂದೇ ಫ್ಲಾಟ್‌ಫಾರಂ ಇರುವುದರಿಂದ ಇಲ್ಲಿ ಹಳಿದಾಟಿಯೇ ಜನರು ಬರಬೇಕಿದೆ. ಎರಡು ಫ್ಲಾಟ್‌ಫಾರಂ ನಿರ್ಮಾಣವಾದರೆ ಪ್ರಯಾಣಿಕರಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಅವಕಾಶವಿದೆ. ಸದ್ಯ ಇಲ್ಲಿ ರೈಲುಗಳ ಓಡಾಟ ನಿರಂತರ ಇರುವುದರಿಂದ ಜನರು ತೀರ ಎಚ್ಚರಿಕೆಯಿಂದ ಹಳಿದಾಟಬೇಕಾಗುತ್ತದೆ.

ಸ್ಟೇಷನ್‌ಗೆ ಸಂಪರ್ಕ ರಸ್ತೆ
ನಾಡ ಗುಡ್ಡೆಯಂಗಡಿ ಪಂಚಾಯತ್‌ ವ್ಯಾಪ್ತಿಯ ರಸ್ತೆ ಈ ರೈಲು ನಿಲ್ದಾಣವನ್ನು ತಲುಪುತ್ತದೆ. ಆದರೆ ಸುಮಾರು 200 ಮೀ.ದೂರಕ್ಕೆ ಡಾಮರ್‌ ಹಾಕಿಲ್ಲ. ಇಷ್ಟೇ ಬಾಕಿ ಇದೆ ಎಂದರೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ವಾಹನಗಳಿಗೂ ತೊಂದರೆ.

ಸಂಪರ್ಕ ವಾಹನಗಳಿಲ್ಲ
ಸೇನಾಪುರದಲ್ಲಿ ರೈಲಿಳಿದರೆ, ಬಳಿಕ ಸಂಪರ್ಕ ವಾಹನಗಳೇ ಇಲ್ಲ. ಒಂದಷ್ಟು ದೂರ ಸಾಗಿದರೆ ಖಾಸಗಿ ಬಸ್‌ಗಳು ಸಿಗುತ್ತವೆ. ಮುಖ್ಯರಸ್ತೆಯಿಂದ ಇಲ್ಲಿಗೆ ಸಂಪರ್ಕ ವಾಹನಗಳಿಲ್ಲ. ರಿಕ್ಷಾ-ಬಸ್‌ ಹಿಡಿದೇ ಸಾಗಬೇಕಿದೆ.

ಒಂದೇ ಫ್ಲಾಟ್‌ಫಾರಂ
ಕೊಂಕಣ ರೈಲ್ವೇ ವ್ಯಾಪ್ತಿಯ ಸೇನಾಪುರ ರೈಲ್ವೇ ಸ್ಟೇಷನ್‌ನಲ್ಲಿ ಒಟ್ಟು ಮೂರು ಟ್ರಾಕ್‌ಗಳಿವೆ. ಆದರೆ ಫ್ಲಾಟ್‌ಫಾರಂ ಒಂದೇ ಇದೆ. ತಾಂತ್ರಿಕ ಕಾರಣಗಳಿಗಾಗಿ ಅನೇಕ ಬಾರಿ ರೈಲು ನಿಲುಗಡೆಯನ್ನು ಫ್ಲಾಟ್‌ ಫಾರಂ ಇಲ್ಲದ ಟ್ರಾಕ್‌ನಲ್ಲಿ ಕೂಡ ಮಾಡಲಾಗುತ್ತದೆ. ಆಗ ಪ್ರಯಾಣಿಕರಿಗೆ ಇಳಿಯುವುದು ಕಷ್ಟ. ಮಹಿಇಳೆಯರು-ಮಕ್ಕಳು ಇದ್ದಾಗ ತೊಂದರೆ ಅಷ್ಟಿಷ್ಟಲ್ಲ. ನಿತ್ಯವೂ ಪ್ರಯಾಣಿಕರು ಈ ತೊಂದರೆ ಅನುಭವಿಸಬೇಕಾಗಿದೆ.

ಹಳಿ ದಾಟುವುದು ಕಷ್ಟ  
ಹಲವಾರು ಬಾರಿ ರೈಲು ಸ್ಟೇಷನ್‌ನ ಫ್ಲಾಟ್‌ಫಾರಂ ಇರುವ ಇನ್ನೊಂದು ಬದಿಯಲ್ಲಿ ನಿಲ್ಲುತ್ತದೆ. ಆಗ ಹಳಿ ದಾಟಲು ಕಷ್ಟವಾಗುತ್ತದೆ. ಇನ್ನೊಂದು ಟ್ರ್ಯಾಕ್‌ಬದಿ ಫ್ಲಾಟ್‌ಫಾರಂ, ಪಾದಚಾರಿ ಮೇಲ್ಸೇತುವೆ ಇದ್ದರೆ ಅನುಕೂಲ.
– ಶ್ಯಾಮಲಾ,
ರೈಲು ಪ್ರಯಾಣಿಕರು

MyByndoor News

Leave a Reply

Your email address will not be published.

error: Mere Bai..Copy Matt Kar..