ಅಗ್ರಸ್ಥಾನದಲ್ಲಿ ಮುಂದುವರಿದ ನಡಾಲ್‌
ಪ್ಯಾರಿಸ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್‌ ನಡಾಲ್‌, ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಭಾನುವಾರ ಮುಕ್ತಾಯಗೊಂಡ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಡಾಲ್‌ ಪ್ರಶಸ್ತಿ ಜಯಿಸಿದ್ದರು. ಇದರೊಂದಿಗೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಒಟ್ಟು 11 ಟ್ರೋಫಿಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದರು.

ನಡಾಲ್‌ ಖಾತೆಯಲ್ಲಿ ಒಟ್ಟು 8770 ಪಾಯಿಂಟ್ಸ್‌ ಇದೆ.  ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ (8670 ಪಾ.) ಎರಡನೇ ಸ್ಥಾನ ಹೊಂದಿದ್ದಾರೆ.

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಮತ್ತು ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರು ಕ್ರಮವಾಗಿ ಮೂರರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿದ್ದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌, ಏಳನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಒಂದು ಸ್ಥಾನ ಮೇಲೇರಿದ್ದಾರೆ.

ಭಾರತದ ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ ಅಗ್ರ 100ರೊಳಗಿನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಒಂಬತ್ತು ಸ್ಥಾನ ಪ್ರಗತಿ ಕಂಡಿರುವ ಅವರು 84ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಅಗ್ರಸ್ಥಾನಲ್ಲಿದ್ದಾರೆ. ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಒಟ್ಟು 7,970 ಪಾಯಿಂಟ್ಸ್‌ ಕಲೆಹಾಕಿದ್ದಾರೆ.

ಡೆನ್ಮಾರ್ಕ್‌ನ ಕ್ಯಾರೋಲಿನ್‌ ವೋಜ್ನಿಯಾಕಿ, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, ಅಮೆರಿಕದ ಸ್ಲೊವಾನ್‌ ಸ್ಟೀಫನ್ಸ್‌ ಮತ್ತು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರು ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

MyByndoor News

Leave a Reply

Your email address will not be published.

error: Mere Bai..Copy Matt Kar..