ಬೈಂದೂರು ಪೂರ್ಣಪ್ರಮಾಣದ ತಾಲ್ಲೂಕು ಆಗಲಿ : ಬಿ. ಜಗನ್ನಾಥ ಶೆಟ್ಟಿ

ಬೈಂದೂರು : ಬೈಂದೂರು ತಾಲ್ಲೂಕು ರಚನೆಯಾಗಿ ಒಂದು ವರ್ಷ ಕಳೆದರೂ ಅಲ್ಲಿ ಜನರಿಗೆ ಸಿಗಬೇಕಾದ ಎಲ್ಲ ಸೇವೆಗಳು ಸಿಗುತ್ತಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಎಲ್ಲ ಕಚೇರಿಗಳನ್ನು ತೆರೆದು ಪೂರ್ಣಪ್ರಮಾಣದ ತಾಲ್ಲೂಕು ಆಗಿ ಮಾಡಬೇಕು ಎಂದು ನಿವೃತ್ತ ಐಎಫ್‍ಎಸ್ ಅಧಿಕಾರಿ ತಾಲ್ಲೂಕು ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಹೇಳಿದರು.

ಇಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಒತ್ತಾಯ ಮಾಡಿದರು.

ಒಂದೆಡೆ ಬೈಂದೂರು ತಾಲ್ಲೂಕನ್ನು ಹಿಂದಿನ ತಾಲ್ಲೂಕು ರಚನಾ ಸಮಿತಿಗಳ ಶಿಫಾರಸಿನಂತೆ 56 ಗ್ರಾಮಗಳಿಗೆ ಬದಲಾಗಿ ಕೇವಲ ಬೈಂದೂರು ಹೋಬಳಿಯ 26 ಗ್ರಾಮಗಳಿಗೆ ಸೀಮಿತಗೊಳಿಸುವ ಮೂಲಕ ಜನರನ್ನು ನಿರಾಸೆಗೊಳಿಸಲಾಗಿದೆ. ಇನ್ನೊಂದೆಡೆ ಅದು ನಾಮ್ ಕಾ ವಾಸ್ತೆ ತಾಲ್ಲೂಕು ಆಗಿ ಮುಂದುವರಿದಿದೆ. ನ್ಯಾಯಾಲಯ, ತಾಲ್ಲೂಕು ಪಂಚಾಯಿತಿ, , ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಸಹಕಾರಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸೇರಿದಂತೆ ಹತ್ತಾರು ಇಲಾಖಾ ಕಚೇರಿಗಳು ಇಲ್ಲಿಗೆ ಬಂದಿಲ್ಲ. ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಲ್ಲ. ಜನರು ಹಲವು ಕೆಲಸಗಳಿಗೆ ಹಿಂದಿನ ತಾಲ್ಲೂಕು ಕೇಂದ್ರವಾದ ಕುಂದಾಪುರಕ್ಕೆ ಹೋಗಬೇಕಿದೆ. ಅವುಗಳು ಇಲ್ಲದಿರುವುದರಿಂದ ಅಭಿವೃದ್ಧಿ ಕಾರ್ಯಗಳೂ ಸರಿಯಾಗಿ ನಡೆಯುತ್ತಿಲ್ಲ. ಆದುದರಿಂದ ಅವುಗಳನ್ನು ಶೀಘ್ರ ಆರಂಭಿಸಿ ತಾಲ್ಲೂಕು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಕಾರ್ಯಗಳ ಕುರಿತು ಮಾತನಾಡಿದ ಅವರು ಬೈಂದೂರಿನಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೆಡೆ ಕಾರ್ಯಾಚರಿಸಲು ಸಾಧ್ಯವಾಗುವಂತೆ ಮಿನಿ ವಿಧಾನ ಸೌಧ ನಿರ್ಮಿಸಬೇಕು. ರೈಲ್ವೆ ನಿಲ್ದಾಣವನ್ನ ಮೇಲ್ದರ್ಜೆಗೇರಿಸಬೇಕು. ಕುಡಿಯುವ ನೀರಿನ ಕೊರತೆ ನೀಗಲು ಯೋಜನೆ ರೂಪಿಸಿ ಅನುಷ್ಠಾನಿಸಬೇಕು. ಗ್ರಾಮೀಣ ಪ್ರದೇಶಗಳನ್ನು ಬೈಂದೂರಿನೊಂದಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಇರುವ ರೈಲ್ವೆ ಗೇಟ್‍ಗಳ ಬದಲು ಸೇತುವೆ ನಿರ್ಮಿಸಬೇಕು. ಬೈಂದೂರು ಪೇಟೆಯೊಳಗಿನ ರಸ್ತೆಗಳಲ್ಲಿ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಿ, ರಸ್ತೆಯನ್ನು ಅಗಲಗೊಳಿಸಬೇಕು. ಬಸ್ ನಿಲ್ದಾಣದಲ್ಲಿ ಎಲ್ಲ ಸೌಕರ್ಯ ನಿರ್ಮಿಸಿ ಅದನ್ನು ಪೂರ್ಣಪ್ರಮಾಣದಲ್ಲಿ ಬಳಸಬೇಕು. ಸುತ್ತಲಿನ ಗ್ರಾಮಗಳನ್ನು ಒಟ್ಟುಗೂಡಿಸಿ ಪುರಸಭೆ ರಚಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ತಾಲ್ಲೂಕಿನಲ್ಲಿ ವಿಪುಲ ಅವಕಾಶ ಇರುವುದರಿಂದ ವತ್ತಿನಣೆಯಲ್ಲಿ ಏರ್‍ಸ್ಟ್ರಿಪ್ ನಿರ್ಮಿಸಬೇಕು. ಸಮಿತಿಯು ಈ ಎಲ್ಲ ವಿಚಾರಗಳ ಕುರಿತು ಶಾಸಕರ, ಸಂಸದರ ಮೇಲೆ ಒತ್ತಾಯ ತರುವುದರ ಜತೆಗೆ ಸರ್ಕಾರದೊಂದಿಗೆ ವ್ಯವಹರಿಸುತ್ತಿದೆ ಎಂದು ಅವರು ಹೇಳಿದರು.

ಸಮಿತಿಯ ಕಾರ್ಯದರ್ಶಿ ಎಂ. ಗೋವಿಂದ, ಸದಸ್ಯ ಎಚ್. ವಸಂತ ಹೆಗ್ಡೆ, ರೋಟರಿ ಕ್ಲಬ್ ಅಧ್ಯಕ್ಷ ಐ. ನಾರಾಯಣ ಇದ್ದರು.

ವರದಿ : ಎಚ್.ಸುಶಾಂತ್ ಬೈಂದೂರು

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)