ಮತ ಮಾರಾಟದಿಂದ ಪ್ರಜಾಪ್ರಭುತ್ವಕ್ಕೆ ಸೋಲು :

ಬೈಂದೂರು: ‘ಮತದಾರರಲ್ಲಿ ರಾಜಕೀಯಪ್ರಜ್ಞೆ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಸೋಲಾಗುತ್ತದೆ. ಜನರು ಹಣ ಮತ್ತು ಆಮಿಷಗಳಿಗೆ ತಮ್ಮ ಮತಗಳನ್ನು ಮಾರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ದುರ್ದೈವದ ವಿದ್ಯಮಾನ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಸಂಚಾಲಕ ಬಿ. ದಾಮೋದರ ಆಚಾರ್ಯ ಹೇಳಿದರು.

ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಬೈಂದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ’ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಆಮಿಷಕ್ಕೆ ಒಳಗಾಗಿ ಮತದಾನ ಮಾಡುವುದು ಸರ್ವಮಾನ್ಯ ಎಂಬ ನೆಲೆಗೆ ತಲಪಿದೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ .ಪ್ರತಿಯೊಬ್ಬರೂ ಜಾಗೃತರಾಗುವುದರ ಜತೆಗೆ ಸುತ್ತಲಿನವರನ್ನು ಎಚ್ಚರಿಸಲು ಸಾಧ್ಯವಾದರೆ ಪ್ರಜಾತಂತ್ರಕ್ಕೆ ಗೆಲುವಿದೆ’ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಮಾತನಾಡಿ, ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಪ್ರತಿನಿಧಿಗಳು ಪ್ರಭುಗಳಲ್ಲ. ಅವರು ಜನರ ಸೇವಕರು. ಅವರು ಜನರಿಗೆ ಉತ್ತರದಾಯಿಗಳು ಎಂಬ ಪ್ರಜ್ಞೆ ಪ್ರತಿನಿಧಿಗಳಲ್ಲಿ ಮೂಡಿದರೆ ಸಾಲದು. ಮತದಾರರಲ್ಲೂ ಮೂಡಬೇಕು.  ಮತದಾರ ಎಂದಿಗೂ ಅಭ್ಯರ್ಥಿ ಅಥವಾ  ರಾಜಕೀಯ ಪಕ್ಷದ ಹಂಗಿನಲ್ಲಿ ಇರಬಾರದು’ ಎಂದರು.

ಪ್ರಾಂಶುಪಾಲ ಪ್ರೊ. ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಶಿವಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ನವೀನ್  ವಂದಿಸಿದರು. ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಬೈಂದೂರು ತಾಲೂಕಿನ ಜನಮನದ ಜೀವನಾಡಿ.
error: My Dear Brother, Please Dont Copy :)